ಸಿಕ್ಕಿಂ ಗಡಿ ಉಲ್ಲಂಘಿಸಿದ್ದು ನೀವೇ, ಕೂಡಲೇ ಸೇನೆಯನ್ನು ವಾಪಸ್ ಕರೆಸಿ: ಭಾರತಕ್ಕೆ ಚೀನಾ

0

ಬೀಜಿಂಗ್: ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದ್ದು, ಸಿಕ್ಕಿ ಗಡಿ ಒಪ್ಪಂದವನ್ನು ಭಾರತ ಉಲ್ಲಂಘನೆ ಮಾಡಿದ್ದು, ಕೂಡಲೇ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಚೀನಾ ಸೋಮವಾರ ಹೇಳಿದೆ.

ಭಾರತ-ಚೀನಾ ಗಡಿ ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಗೆಂಗ್ ಶುವಾಂಗ್ ಅವರು, ಸಿಕ್ಕಿಂ ವಲಯದಲ್ಲಿ ರಸ್ತೆ ನಿರ್ಮಿಸುವ ತನ್ನ ಸೇನೆಯ ಪ್ರಯತ್ನಕ್ಕೆ ಭಾರತೀಯ ಸೇನೆ ತಡೆಯೊಡ್ಡಿರುವುದು ವಿಶ್ವಾಸದ್ರೋಹ ಎಂದು ಹೇಳಿದ್ದಾರೆ.

ಸಿಕ್ಕಿಂ ಗಡಿಯನ್ನು 1890 ಸಿನೋ-ಬ್ರಿಟಿಷ್ ಒಪ್ಪಂದದಲ್ಲಿ ಸ್ಪಷ್ಟವಾಗಿ ಗುರಿತಿಸಲಾಗಿದೆ. 1959ರಲ್ಲಿ ಭಾರತದ ಪ್ರಧಾನಿ ನೆಹರು ಒಪ್ಪಂದ ದೃಢೀಕರಿಸಿ ಪತ್ರ ಬರೆದಿದ್ದಾರೆ. ಆ ನಿಲುವಿಗೆ ಭಾರತ ಸರ್ಕಾರ ವಂಚನೆ ಮಾಡಿದೆ. ಕೂಡಲೇ ತನ್ನ ಸೇನಾ ಪಡೆಗಳನ್ನು ಭಾರತ ಹಿಂದಕ್ಕೆ ಕರೆಸಿಕೊಳ್ಳಬೇಕು. ಅವರು ನಮಗೆ 1962 ಭಾರತ ಬೇರೆ 2017ರ ಭಾರತ ಬೇರೆ ಎಂದು ನೆನಪು ಮಾಡಿಕೊಡುವುದಾದರೆ, 1962ರ ಚೀನಾವೇ ಬೇರೆ ಈಗಿನ ಚೀನಾ ದೇಶವೇ ಬೇರೆ ಎಂಬುದನ್ನೂ ಮರೆಯಬಾರದು ಎಂದು ತಿಳಿಸಿದ್ದಾರೆ.

ಬಿಕ್ಕಟ್ಟು ಬಗೆಹರಿಯದಿದ್ದರೆ ಯುದ್ಧ ಖಚಿತ: ಚೀನಾ ತಜ್ಞರ ಎಚ್ಚರಿಕೆ
ಒಂದೆಡೆ ಉಭಯ ದೇಶಗಳ ನಡುವೆ ವಾಕ್ಸಮರ ಮುಂದುವರೆಯುತ್ದಿದ್ದರೆ, ಮತ್ತೊಂದೆಡೆ ಉಭಯ ದೇಶಗಳು ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸದೇ ಹೋದರೆ ಯುದ್ಧ ನಡೆಯುವುದು ಖಚಿತ ಎಂದು ಚೀನಾ ತಜ್ಞರು ಎಚ್ಚರಿಕೆ ನೀಡಿದ್ದಾರೆ.

1962ರ ಯುದ್ಧದಲ್ಲಿ ಭಾರತದ 4383 ಯೋಧರು ಹಾಗೂ ಚೀನಾದ 722 ಯೋಧರು ಮೃತಪಟ್ಟಿದ್ದರು. ಎರಡೂ ದೇಶಗಳು ಪರಸ್ಪರ ಮಾತುಕತೆಗೆ ಮುಂದಾಗಬೇಕು ಎಂದು ತಜ್ಞರು ತಿಳಿಸಿದ್ದಾರೆ.

ಚೀನಾದ ಬೆಳವಣಿಗೆಯನ್ನು ಹತ್ತಿಕ್ಕಲು ಬದ್ಧವಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಪ್ರಭಾವ ಬೀರಲು ಭಾರತ ಈ ಕ್ರಮ ಕೈಗೊಂಡಿದೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ನಲ್ಲಿ ಲೇಖನ ಪ್ರಕಟಿಸಲಾಗಿದೆ.

Comments

comments

LEAVE A REPLY

Please enter your comment!
Please enter your name here