ಜಯಲಲಿತಾ ಕೊಡನಾಡ್‌ ಎಸ್ಟೇಟ್‌ನಲ್ಲಿ ಮುಂದುವರೆದ ಸಾವಿನ ಸರಣಿ!

0

ಊಟಿ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜೆ. ಜಯಲಲಿತಾ ಅವರ ಒಡೆತನದ ಕೊಡನಾಡ್‌ ಎಸ್ಟೇಟ್‌ನಲ್ಲಿನ ನಿಗೂಢ ಸಾವಿನ ಸರಣಿ ಮುಂದುವರೆದಿದ್ದು, ಎಸ್ಟೇಟ್ ಗೆ ಸೇರಿದ ಅಕೌಂಟಂಟ್‌ ದಿನೇಶ್‌ ಕುಮಾರ್‌ (28ವರ್ಷ) ಎಂಬುವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿದೆ.

ಅಕೌಂಟೆಂಟ್ ದಿನೇಶ್ ಕುಮಾರ್ ಅವರ ಸಾವಿನೊಂದಿಗೆ ಕೊಡನಾಡ್‌ ಎಸ್ಟೇಟ್‌ ನಲ್ಲಿ ಸಂಭವಿಸಿರುವ ಸಾವಿನ ಸಂಖ್ಯೆ 4ಕ್ಕೇರಿಕೆಯಾಗಿದೆ. ಜಯಲಲಿತಾ ಅವರು ಕೊಡನಾಡ್‌ ಎಸ್ಟೇಟ್‌ ನ ಮೂರು ಮಂದಿ ಅಕೌಂಟೆಂಟ್‌ ಗಳ ಪೈಕಿ ದಿನೇಶ್‌ ಕೂಡಾ ಒಬ್ಬರಾಗಿದ್ದರು. ದಿನೇಶ್ ಅವರ ಶವ ಕೊಥಗಿರಿಯ ಅವರ ನಿವಾಸದಲ್ಲಿ ಫ್ಯಾನ್‌ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಕಂಡಬಂದರೂ ಪ್ರಕರಣದು ಕುರಿತು ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಊಟಿ ಎಸ್ ಪಿ ಮುರಳಿ ರಂಬಾ ಅವರು, ಕಳೆದ 15 ದಿನಗಳಿಂದ ಅಕೌಂಟೆಂಟ್ ದಿನೇಶ್ ಕೆಲಸಕ್ಕೆ ಹೋಗಿರಲಿಲ್ಲ. ಅನಾರೋಗ್ಯದ ಕಾರಣದಿಂದ ರಜೆಯಲ್ಲಿದ್ದ ಎಂದು ತಿಳಿಸಿದ್ದಾರೆ. ಇನ್ನು ದಿನೇಶ್ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಅವರ ತಾಯಿ ಹಾಗೂ ತಂಗಿ ಮೊದಲು ನೋಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿತ್ತಾದರೂ ಅಷ್ಚು ಹೊತ್ತಿಗಾಗಲೇ ದಿನೇಶ್ ಸಾವನ್ನಪ್ಪಿದ್ದ ಎಂದು ವೈದ್ಯರು ತಿಳಿಸಿದ್ದಾರೆ.

ಏಪ್ರಿಲ್ 24ರಂದು ಜಯಲಲಿತಾ ಅವರ ಕೊಡನಾಡ್‌ ಎಸ್ಟೇಟ್‌ ಬಂಗಲೆಗೆ ನುಗ್ಗಿದ್ದ ದುಷ್ಕರ್ಮಿಗಳು ಕಾವಲುಗಾರರಾದ ಓಂ ಬಹದ್ದೂರ್‌ (51ವರ್ಷ) ಮತ್ತು ಕೃಷ್ಣ ಬಹದ್ದೂರ್‌ (37ವರ್ಷ) ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಓಂ ಬಹದ್ದೂರ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರೆ, ಕೃಷ್ಣ ಬಹದ್ದೂರ್ ಗಂಭೀರವಾಗಿ ಗಾಯಗೊಂಡಿದ್ದರು. ಈ ಪ್ರಕರಣದ ಶಂಕಿತ ಆರೋಪಿಗಳಾಗಿದ್ದ ಸಿ. ಕನಕರಾಜು (36ವರ್ಷ) ಮತ್ತು ಕೆ.ವಿ. ಸಾಯನ್‌ (35 ವರ್ಷ) ಎಂಬುವರು ಎರಡು ತಿಂಗಳ ಹಿಂದಷ್ಟೇ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು.

ಇನ್ನು ಕನಕರಾಜು ಏಪ್ರಿಲ್‌ 28ರಂದು ಸೇಲಂ ಜಿಲ್ಲೆಯ ಅತ್ತೂರ್‌ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದರು. ಸಾಯನ್‌ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ಕಾರು ಏಪ್ರಿಲ್‌ 29ರ ಬೆಳಗಿನ ಜಾವ ಕನ್ನಾಡಿ ಜಂಕ್ಷನ್‌ ಸಮೀಪ ಅಪಘಾತಕ್ಕೀಡಾಗಿತ್ತು. ಸಾಯನ್‌ ಕುಟುಂಬ ಸಮೇತ ತ್ರಿಶೂರ್‌ ಕಡೆಗೆ ಹೊರಟಿದ್ದ ವೇಳೆ ಕಾರಿಗೆ ಲಾರಿ ಡಿಕ್ಕಿ ಹೊಡೆದು ಸಾಯನ್‌ ಪತ್ನಿ ಮತ್ತು ಐದು ವರ್ಷದ ಮಗಳು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಅಪಘಾತದಲ್ಲಿ ಸಾಯನ್‌ ಗಂಭೀರವಾಗಿ ಗಾಯಗೊಂಡಿದ್ದರು.

ಕನಕರಾಜು 2008ರಿಂದ ಜಯಲಲಿತಾ ಅವರ ಖಾಸಗಿ ಕಾರಿನ ಚಾಲಕನಾಗಿದ್ದ. ಜಯಲಲಿತಾ ಅವರ ಹೆಸರನ್ನು ದುರುಪಯೋಗ ಪಡಿಸಿಕೊಂಡ ಆರೋಪದ ಮೇಲೆ ಆತನನ್ನು 2013ರಲ್ಲಿ ಕೆಲಸದಿಂದ ತೆಗೆದು ಹಾಕಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Comments

comments

LEAVE A REPLY

Please enter your comment!
Please enter your name here