ಗಡಿಯಲ್ಲಿ ಮುಂದುವರೆದ ಉದ್ಧಟತನ: ಭಾರತದ ಗಡಿಯಲ್ಲಿ ಸಬ್‌ಮರಿನ್‌ ನಿಯೋಜಿಸಿದ ಚೀನಾ

0

ನವದೆಹಲಿ: ಇಂಡೋ-ಚೀನಾ ಗಡಿ ವಿವಾದ ಸಂಬಂಧ ಉಭಯ ರಾಷ್ಟ್ರಗಳ ನಡುವಿನ ಸಂಬಂಧದಲ್ಲಿ ಈಗಾಗಲೇ ಬಿರುಕು ಮೂಡಿದ್ದು, ಚೀನಾ ಪದೇ ಪದೇ ಕಾಲು ಕೆರೆದುಕೊಂಡು ಭಾರತವನ್ನು ಕೆಣಕುವ ಪ್ರಯತ್ನವನ್ನು ಮಾಡುತ್ತಿದೆ. ಗಡಿಯಲ್ಲಿ ತನ್ನ ಉದ್ಧಟನವನ್ನು ಮುಂದುವರೆಸಿರುವ ಚೀನಾ, ಭಾರತದ ಗಡಿಯಲ್ಲಿ ಸಬ್‌ಮರಿನ್‌ ನಿಯೋಜಿಸಿದೆ.

ಕೆಲ ದಿನಗಳ ಹಿಂದಷ್ಟೇ ಸಿಕ್ಕಿಂ ಗಡಿಯಲ್ಲಿ ಭಾರತದ ಒಳ ಪ್ರವೇಶ ಮಾಡಲು ಚೀನಾ ಯೋಧರು ಯತ್ನ ನಡೆಸುತ್ತಿದ್ದ ವೇಳೆ ಭಾರತೀಯ ಸೇನಿಕರೊಂದಿಗೆ ಮಾತಿನ ಚಕಮಕಿಗಳು ನಡೆದಿದ್ದವು. ಉಭಯ ರಾಷ್ಟ್ರಗಳ ಗಡಿ ವಿವಾದ ಇದೀಗ ಭಾರತ ಮತ್ತು ಚೀನಾ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗುವಂತೆ ಮಾಡಿದೆ. ಇದರ ಬೆನ್ನಲ್ಲೇ ಗಡಿಯಲ್ಲಿ ಎರಡೂ ರಾಷ್ಟ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಸೇನೆಯನ್ನು ಸನ್ನದ್ಧಗೊಳಿಸಿದೆ.

ಈ ಎಲ್ಲಾ ಬೆಳವಣಿಗೆಯ ನಡುವೆಯ ಚೀನಾ ತನ್ನ ದುರ್ಬುದ್ಧಿಯನ್ನು ಮುಂದುವರೆಸಿದ್ದು, ಭಾರತದ ಸಮುದ್ರ ತೀರದಲ್ಲಿ ಚೀನಾ ಜಲಾಂತರ್ಗಾಮಿ ನೌಕೆಯನ್ನು ಚೀನಾ ನಿಯೋಜಿಸುವ ಮೂಲಕ ಭಾರತವನ್ನು ಕೆಣಕುವ ಪ್ರಯತ್ನವನ್ನು ಮಾಡುತ್ತಿದೆ. ಭಾರತದ ಗಡಿಯಲ್ಲಿ ಚೀನಾ ಜಲಾಂತರ್ಗಾಮಿ ಗಸ್ತು ತಿರುಗುತ್ತಿದ್ದು, ಗಡಿಯಲ್ಲಿ ಮತ್ತಷ್ಟು ಆಂತಕದ ವಾತಾವರಣ ನಿರ್ಮಾಣವಾಗಿದೆ.

ಭಾರತದ ಗಡಿಯಲ್ಲಿ ಸಬ್‌ಮರಿನ್‌ ಗಳು ತಿರುಗುತ್ತಿರುವುದನ್ನು ಅಧಿಕಾರಿಗಳು ಖಚಿತಪಡಿಸಿದ್ದು, ಉಭಯ ರಾಷ್ಟ್ರಗಳ ನಡುವೆ ಇರುವ ಪ್ರಸ್ತುತ ಪರಿಸ್ಥಿತಿಯಲ್ಲಿ ಸಬ್ ಮರಿನ್ ಗಳ ನಿಯೋಜನೆ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಭೂತಾನ್-ಭಾರತ-ಚೀನಾ ಪರಸ್ಪರ ಸಂಧಿಸುವ ಸಂಧಿ ಸ್ಥಳ ಎಂದು ಹೇಳಲಾದ ಸಿಕ್ಕಿಂ ವಲಯದ ಡೊಕ್ಲಾಮ್ ಪ್ರದೇಶದ ಮಾಲೀಕತ್ವ ಯಾರದ್ದು ಎಂಬ ಬಗ್ಗೆ ಈಗ ಭಾರತ-ಚೀನಾ ಜಟಾಪಟಿ ಆರಂಭಿಸಿವೆ. ಈ ವಲಯ ಭೂತಾನ್ ಗೆ ಸೇರಿದ್ದು ಎನ್ನಲಾಗಿದ್ದು, ಭೂತಾನ್ ಬೆಂಬಲಕ್ಕೆ ನಿಂತಿರುವ ಭಾರತೀಯ ಸೇನೆಯು, ಡೊಕ್ಲಾಮ್’ಗೆ ತನ್ನ ಸೇನೆಯನ್ನು ರವಾನಿಸಿದೆ. ಇದು ಚೀನಾವನ್ನು ಸಿಟ್ಟಿಗೆಬ್ಬಿಸಿದೆ.

ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ಚೀನಾ 1962ರ ಯುದ್ಧದಿಂದ ಭಾರತದ ಪಾಠ ಕಲಿಯಬೇಕಿದೆ ಎಂದು ಹೇಳಿತ್ತು. ಇದಕ್ಕೆ ತಿರುಗೇಟು ನೀಡಿದ್ದ ರಕ್ಷಣಾ ಸಚಿವ ಅರುಣ್ ಜೇಟ್ಲಿಯವರು, 1962ರ ಘಟನೆಯನ್ನು ಚೀನಾ ನಮಗೆ ನೆನಪಿಸಲು ಹೊರಟಿದೆ ಎಂದರೆ, 1962ರ ಭಾರತವೇ ಬೇರೆ, ಈಗಿನ ಭಾರತವೇ ಬೇರೆ ಎಂದೇ ಹೇಳಬೇಕಾಗುತ್ತದೆ ಎಂದಿದ್ದರು.

ಜೇಟ್ಲಿ ಹೇಳಿಕೆ ಕಿಡಿಕಾರಿದ್ದ ಚೀನಾ, ನಮಗೆ 1962 ಭಾರತ ಬೇರೆ, 2017ರ ಭಾರತ ಬೇರೆ ಎಂದು ನೆನಪು ಮಾಡಿಕೊಡುವುದಾದರೆ, 1962ರ ಚೀನಾವೇ ಬೇರೆ ಈಗಿನ ಚೀನಾ ದೇಶವೇ ಬೇರೆ ಎಂಬುದನ್ನೂ ಮರೆಯಬಾರದು ಎಂದು ಹೇಳಿತ್ತು. ಇದರ ಬೆನ್ನಲ್ಲೇ ಚೀನಾ ತನ್ನ ಜಲಾಂತರ್ಗಾಮಿ ನೌಕೆಯನ್ನು ಭಾರತದ ಗಡಿಯಲ್ಲಿ ನಿಯೋಜನೆ ಮಾಡಿದೆ.

Comments

comments

LEAVE A REPLY

Please enter your comment!
Please enter your name here